ಬಾರ್ಡೆ, ಜ್ಯೂಲ್ಸ್ ಬ್ಯಾಪ್ಟಿಸ್ಟ್ ವಿನ್ಸೆಂಟ್		
1870-11961 ಬೆಲ್ಜಿಯಮ್ಮಿನ ದೇಹಕ್ರಿಯಾವಿಜ್ಞಾನಿ. ದೇಹದಲ್ಲಿಯ ಪ್ರತಿರೋಧ ವ್ಯವಸ್ಥೆಯ (ರೆಸಿಸ್ಟೆನ್ಸ್) ಆವಿಷ್ಕಾರಕ್ಕಾಗಿ ದೇಹಕ್ರಿಯಾ ವಿಜ್ಞಾನ ಹಾಗೂ ವೈದ್ಯಕ್ಕೆ ಮೀಸಲಾಗಿರುವ ನೊಬೆಲ್ ಪಾರಿತೋಷಿಕ ವಿಜೇತ (1919).
ಬೆಲ್ಜಿಯಮ್ಮಿನ ಸಾಯಿಗ್ನೀಸ್ ಎಂಬಲ್ಲಿ ಒಬ್ಬ ಸಾಮಾನ್ಯ ಅಧ್ಯಾಪಕನ ಮಗನಾಗಿ ಜನನ. 13-6-1870. 1892ರಲ್ಲಿ ಬ್ರಸ್ಸೆಲ್ಸ್ ವಿಶ್ವವಿದ್ಯಾಲಯದ ಎಂ.ಡಿ. ಪದವಿ ಪಡೆದ. ಪ್ರೌಢ ವ್ಯಾಸಂಗಕ್ಕಾಗಿ 1894ರಲ್ಲಿ ಬೆಲ್ಜಿಯಮ್ ಸರ್ಕಾರ ವಿದ್ಯಾರ್ಥಿ ವೇತನ ನೀಡಿತು. ಬಾರ್ಡೆ ಪ್ಯಾರಿಸ್ಸಿಗೆ ತೆರಳಿ ಅಲ್ಲಿ ಪಾಶ್ಚರ್ ಸಂಶೋಧನಾ ಸಂಸ್ಥೆಯಲ್ಲಿ ಎಲಿಮೆಶ್ಚಿನಿಕಾಫ್‍ನ ಕೈಕೆಳಗೆ ವ್ಯಾಸಂಗ ಕೈಗೊಂಡ. ಏಳು ವರ್ಷ ಅಲ್ಲಿ ದುಡಿದು ಸಂದಿಗ್ಧವಾಗಿದ್ದ ಅನೇಕ ವೈದ್ಯಕೀಯ ವಿಷಯಗಳನ್ನು ಸ್ಪಷ್ಟೀಕರಿಸಿ ಪ್ರಸಿದ್ಧಿ ಗಳಿಸಿದ (1900).

ಬ್ರಸ್ಸೆಲ್ಸಿನ ಹತ್ತಿರ ಬ್ರಬಾಂಟ್ ಪ್ರಾಂತ್ಯದಲ್ಲಿ ಒಂದು ಪಾಶ್ಚರ್ ಸಂಸ್ಥೆ ಸ್ಥಾಪಿಸಲು ಬೆಲ್ಜಿಯಮ್ ಸರ್ಕಾರ ಬಾರ್ಡೆಯನ್ನು 1901ರಲ್ಲಿ ವಾಪಸ್ಸು ಕರೆಯಿಸಿಕೊಂಡಿತು. ಇವನು ಅಲ್ಲಿಯ ಪ್ರಥಮ ನಿರ್ದೇಶಕನಾಗಿ ನೇಮಿತನಾದುದಲ್ಲದೆ ಬ್ರಸ್ಸೆಲ್ಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿಯೂ ನೇಮಿಸಲ್ಪಟ್ಟ.

ಪ್ಯಾರಿಸ್ಸಿನಲ್ಲಿ ಮೆಶ್ಚಿನಿಕಾಫನ ಪ್ರಯೋಗಾಲಯದಲ್ಲಿ ಪ್ರಾರಂಭದಲ್ಲಿಯೇ ಬಾರ್ಡೆ ದೇಶದಲ್ಲಿ ಏಕಾಣುನಾಶದ ವಿಚಾರವಾಗಿ ಪ್ರಯೋಗಾತ್ಮಕ ಸಂಶೋಧನೆ ಕೈಗೊಂಡ. ಕಾಲರ ವಿಷಾಣು ಸೋಂಕಿನ ವಿರುದ್ಧ ರಕ್ಷಣೆ ಪಡೆದಿದ್ದ ಇಲಿಗಳ ಉದರದೊಳಗೆ ಅದೇ ಕಾಲರ ವಿಷಾಣುಗಳನ್ನು ಹುದುಗಿಸಿದಲ್ಲಿ ಅವು ನಾಶಪಡಿಸಲ್ಪಡುವುವೆಂದು ಫೈಪರ್ ಮತ್ತು ಇತರರು ತೋರಿಸಿದ್ದರು (1894). ನಾಶದ ವಿವರ ಪಡೆಯಲು ಬಾರ್ಡೆ ಪ್ರಯೋಗ ಮಾಡಿ ಏಕಾಣುನಾಶ ಎರಡು ಬಗೆಯ ವಸ್ತುಗಳ ಸಂಯುಕ್ತ ಕಾರ್ಯಾಚರಣೆಯಿಂದ ಏರ್ಪಡುವುದೆಂದು ವಿಶದೀಕರಿಸಿದ (1895). ಮೊದಲನೆಯದು, ರಕ್ಷಣೆ ಪಡೆದ ಇಲಿಗಳ ರಕ್ತದಲ್ಲಿರುವ ಒಂದು ಏಕಾಣು ಪ್ರತಿಕಾಯ (ಆ್ಯಂಟಿಬಾಡಿ). ರಕ್ಷಣೆ ಪಡೆದಿರುವ ವ್ಯಕ್ತಿಯ ರಕ್ತದಲ್ಲಿ ಮಾತ್ರ ಇರುವ ವಸ್ತುವಿದು. ನಿರ್ದಿಷ್ಟ ಏಕಾಣುವಿನ ವಿರುದ್ಧ ಮಾತ್ರ ಇದರ ಕಾರ್ಯಾಚರಣೆ. ಆದ್ದರಿಂದ ಇದೊಂದು ವಿಶಿಷ್ಟ (ಸ್ಪೆಸಿಫಿಕ್). ರಕ್ತವನ್ನು 350 ಯಷ್ಟು ಉಷ್ಣತೆಯಲ್ಲಿಟ್ಟರೂ ನಾಶವಾಗದ ಸ್ಥಿರವಸ್ತುವಿದು. ಬಹುಶಃ ಇದು ನಿರ್ದಿಷ್ಟ ಏಕಾಣುಗಳು ಸುಲಭವಾಗಿ ಬಲಿ ಆಗುವಂತೆ ಅವನ್ನು ಸೂಕ್ಷ್ಮಗ್ರಾಹಕವಾಗಿ (ಸೆನ್ಸಿಟಿವ್) ಮಾಡುತ್ತದೆ.

ಎರಡನೆಯದು ಇಂಥ ಯಾವ ವೈಶಿಷ್ಟ್ಯವೂ ಇಲ್ಲದ ವಸ್ತು. ರಕ್ಷಣೆ ಪಡೆದ ಮತ್ತು ಪಡೆಯದ ವ್ಯಕ್ತಿಗಳಲ್ಲಿ ಮಾತ್ರವಲ್ಲ ಎಲ್ಲ ಪ್ರಾಣಿಗಳ ರಕ್ತದಲ್ಲೂ ಸರ್ವ ಸಾಮಾನ್ಯವಾಗಿ ಸ್ವಾಭಾವಿಕವಾಗಿಯೇ ಇರುವ ವಸ್ತುವಿದು. ಎಲ್ಲ ಬಗೆಯ ವಿಶಿಷ್ಟ ಪ್ರತಿವಸ್ತುಗಳೊಡನೆಯೂ ಇದು ಸಂಯುಕ್ತ ಕಾರ್ಯಾಚರಣೆ ಎಸಗಬಲ್ಲದು. ಆದರೆ ರಕ್ತವನ್ನು 550 ಉಷ್ಣತೆಗೆ ಏರಿಸಿದಾಗ ಇಲ್ಲವೆ ಕೆಲಕಾಲ ಸಂಗ್ರಹಿಸಿ ಇಟ್ಟಾಗ ಇಲ್ಲವಾಗಿ ಹೋಗುವ ಅಸ್ಥಿರ ವಸ್ತು (ಲೆಬೈಲ್). ಇದನ್ನು ಬುಕ್ನರ್ ಎಂಬ ವೈದ್ಯ ಮುಂಚೆಯೇ ಗುರುತಿಸಿ ಇದಕ್ಕೆ ಅಲೆಕ್ಸಿನ್ ಎಂದು ಹೆಸರಿಟ್ಟಿದ್ದ. ಬಾರ್ಡೆ ಈ ವಸ್ತುವಿಗೆ ಕಾಂಪ್ಲಿಮೆಂಟ್ (ಪೂರಕ) ಎಂದು ಹೆಸರಿಟ್ಟ. ಇದೇ ಇಂದು ಬಳಕೆಯಲ್ಲಿದೆ. ಪ್ರತಿ ವಸ್ತುವಿನ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿ ಅದರ ಕಾರ್ಯ ಸಫಲವಾಗುವಂತೆ ಮಾಡಲು ಅತ್ಯಗತ್ಯವಾಗಿರುವುದರಿಂದ ಇದಕ್ಕೆ ಕಾಂಪ್ಲಿಮೆಂಟ್ ಎಂಬ ಹೆಸರು.

ಒಂದು ಪ್ರಾಣಿಯ ಧಮನಿಯೊಳಕ್ಕೆ ಇನ್ನೊಂದು ಪ್ರಾಣಿಯ ರಕ್ತವನ್ನು ಅಧಿಕ ಪ್ರಮಾಣದಲ್ಲಿ ಚುಚ್ಚುಮದ್ದಾಗಿ ಕೊಟ್ಟರೆ ಮೊದಲನೆಯ ಪ್ರಾಣಿ ಸತ್ತೇ ಹೋಗಬಹುದು. ಆದರೆ ಅಲ್ಪ ಪ್ರಮಾಣದಲ್ಲಿ ಕೊಟ್ಟರೆ ಎರಡನೆಯ ಪ್ರಾಣಿಯ ರಕ್ತಕಣಗಳು ಮೊದಲ ಪ್ರಾಣಿಯ ದೇಹದಲ್ಲಿ ಕ್ರಮೇಣ ನಾಶಗೊಳಿಸಲ್ಪಡುತ್ತವೆ. ಎರಡನೆಯ ಬಾರಿ ಹೀಗೆ ಅನ್ಯ ಪ್ರಾಣಿ ರಕ್ತವನ್ನು (ಅಲ್ಪಪ್ರಮಾಣದಲ್ಲಿ) ಕೊಟ್ಟರೆ ಅದು ಶೀಘ್ರವಾಗಿಯೇ ನಾಶಪಡಿಸಲ್ಪಡುತ್ತದೆ. ಮೂರನೆಯ ಸಲ ನಾಶ ಇನ್ನೂ ಶೀಘ್ರ ಇತ್ಯಾದಿ. ಮೊದಲನೆಯ ಪ್ರಾಣಿಯ ರಕ್ತದಲ್ಲಿ ಅನ್ಯಜಾತಿಯ ಪ್ರಾಣಿಯ ರಕ್ತಕಣಗಳ ಪ್ರತಿವಿರುದ್ಧ ವಸ್ತು ತಯಾರಾಗಿ ಪರಿಚಲನೆಯಲ್ಲಿ ಇರುವುದರಿಂದ ಇಂಥ ತಾತ್ಕ್ಷಣಿಕ ನಾಶ ಸಾಧ್ಯವಾಗುತ್ತದೆ. ಅಂದರೆ ಏಕಾಣುಗಳ ವಿರುದ್ಧವಾಗಿ ಹೇಗೆ ಪ್ರಾಯೋಗಿಕವಾಗಿಯೂ ಪ್ರತಿರೋಧನ ವಸ್ತುವನ್ನು ಪ್ರಾಣಿ ದೇಹದಲ್ಲಿ ಉಂಟುಮಾಡಬಹುದೋ ಅದೇ ರೀತಿ ಅನ್ಯಜಾತಿ ರಕ್ತಕಣಗಳಿಗೂ ಪ್ರತಿವಸ್ತು ಪಾಣಿದೇಹದಲ್ಲಿ ಸೃಷ್ಟಿ ಆಗುವಂತೆ ಮಾಡಬಹುದು. ಈ ವಸ್ತುವಿಗೆ ಹೀಮೊಲೈಸಿನ್ ಎಂದು ಹೆಸರು. ಇದೂ ನಿರ್ದಿಷ್ಟ ಅನ್ಯಜಾತಿ ರಕ್ತಕಣವನ್ನು ಮಾತ್ರ ನಾಶಮಾಡಬಲ್ಲುದೇ ವಿನಾ ಬೇರೆ ಜಾತಿ ಕಣಗಳನ್ನು ಅಲ್ಲ. ಹೀಮೋಲೈಸಿನ್ನಿನಿಂದ ಹೀಗೆ ಅನುಗುಣವಾದ ಅನ್ಯಜಾತಿ ರಕ್ತಕಣ ನಾಶವಾಗುವುದು ಕೂಡ ರಕ್ಷಣೆ ಪಡೆದ ಇಲಿಗಳಲ್ಲಿ ನಿರ್ದಿಷ್ಟ ಏಕಾಣುನಾಶದಂತೆಯೇ ಇರುವುದನ್ನು ಬಾರ್ಡೆ 1908ರಲ್ಲಿ ಸ್ಪಷ್ಟಪಡಿಸಿ ಹೀಮೋಲೈಸಿನ್ನಿನ ಕಾರ್ಯಾಚರಣೆಗೂ ಕಾಂಪ್ಲಿಮೆಂಟ್ ಅಗತ್ಯ ಎಂದು ತೋರಿಸಿದ.
ಪಾಲ್ ಆರ್ಲಿಕ್ಕನು ಪ್ರತಿವಸ್ತುವನ್ನು ಆಂಬೋಸೆಪ್ಟಾರ್ ಎಂದು ಹೆಸರಿಸಿ ಅದು ಕಾಂಪ್ಲಿಮೆಂಟನ್ನು ಪ್ರತಿವಸ್ತುವಿಗೆ ವಿರುದ್ಧವಾದ ಮೂಲಘಟಕಕ್ಕೆ (ಏಕಾಣು ಇಲ್ಲವೇ ರಕ್ತಕಣ) ಅಂಟಿಸುವುದರಿಂದ (ಆ ಮೂಲ ಕಣ) ನಾಶವಾಗುತ್ತದೆಂದು ಹೇಳಿದ. ಕಾಂಪ್ಲಿಮೆಂಟ್ ಒಂದು ಬೀಗಕ್ಕೆ ಸರಿಹೋಗುವಂಥ ಕೀಲಿಯನ್ನು ಹುಡುಕಿ ಅದು ಬೀಗಕ್ಕೆ ಸಿಕ್ಕಿಕೊಳ್ಳುವ ರೀತಿಯಲ್ಲಿ ಕಾರ್ಯವೆಸಗುವುದೆಂದು ಹೇಳಿದ. ಕಾಂಪ್ಲಿಮೆಂಟ್ ಪ್ರತಿವಸ್ತು ಮತ್ತು ಮೂಲವಸ್ತು ಇವೆಲ್ಲ ನಿರ್ದಿಷ್ಟ ರಾಸಾಯನಿಕ ವಸ್ತುಗಳೆಂದೂ ಇವುಗಳ ಪರಸ್ಪರ ಕೂಡುವಿಕೆ ರಾಸಾಯನಿಕ ತತ್ತ್ವಗಳಿಗೆ ಅನುಸಾರವಾಗಿ ಆಗುವುದೆಂದೂ ವಿವರಿಸಿದ. ಪ್ರತಿವಸ್ತು ದೇಹದಲ್ಲಿ ಹೊಸದಾಗಿ ಕ್ರಮೇಣ ಸೃಷ್ಟಿ ಆಗುವುದೆಂದೂ ಕಾಂಪ್ಲಿಮೆಂಟ್ ಆಜನ್ಮವಾಗಿ ದೇಹದಲ್ಲಿ ಇದ್ದೇ ಇರುವುದೆಂದೂ ಇವುಗಳ ಜೋಡಣೆ ಅಡ್‍ಸಾಪ್ರ್ಷನ್ ಎಂಬ ಭೌತಿಕ ರೀತಿಯದೆಂದೂ ಬಾರ್ಡೆ ಪ್ರತಿಪಾದಿಸಿದ ಸಿದ್ಧಾಂತಕ್ಕೆ ಬದಲಾದ ಈ ವಾದದ ಇತ್ಯರ್ಥಕ್ಕೆ ಹೀಡೆಲ್‍ಬರ್ಗನ ಪ್ರಯೋಗಗಳು ಒದಗಿಬಂದು ಬಾರ್ಡೆಯ ವಾದಕ್ಕೆ ಸಮರ್ಥನೆ ದೊರಕಿತು.
,
ಬಾರ್ಡೆ ತೋರಿಸಿದಂತೆ ಏಕಾಣು ಇಲ್ಲವೆ ಅನ್ಯರಕ್ತಕಣ ಅದಕ್ಕೆ ನಿರ್ದಿಷ್ಟವಾದ ಪ್ರತಿವಸ್ತು ಇಲ್ಲವೆ ಹೀಮೋಲೈಸಿನ್ ಉತ್ಪತ್ತಿ ಆಗುವಂತೆ ಮಾಡುವುದಾದ್ದರಿಂದ ಏಕಾಣು, ಅನ್ಯ ರಕ್ತ ಇತ್ಯಾದಿಗಳಿಗೆ ಪ್ರತಿವಸ್ತುಜನಕಗಳು (ಆಂಟಿಜೆನ್ಸ್) ಎಂದು ಕರೆಯಲಾಗಿದೆ. ಸಾಮಾನ್ಯವಾಗಿ ಪ್ರತಿವಸ್ತು ಜನಕಗಳು ಪ್ರೋಟೀನ್‍ಯುಕ್ತವಾಗಿದ್ದು ಪ್ರತಿವಸ್ತುವಿನ ಸೃಷ್ಟಿಗೆ ಈ ಪ್ರೋಟೀನ್ ಘಟಕವೇ ಪ್ರಮುಖ ಕಾರಣ ಎಂದು ತೋರಿಸಲಾಗಿದೆ. ಮೇಲೆ ಹೇಳಿರುವ ವಿವರಗಳಿಂದ ಪ್ರತಿವಸ್ತುಗಳ ಜನಕ, ಪ್ರತಿವಸ್ತು ಇವು ಎರಡೂ ಕಾರ್ಯಕ್ಷೇತ್ರದಲ್ಲಿ ಒಂದೇ ಕಾಲದಲ್ಲಿ ಇದ್ದರೆ ಆ ಜೋಡಿ ಕಾಂಪ್ಲಿಮೆಂಟನ್ನು ಆಕರ್ಷಿಸುತ್ತದೆ ಮತ್ತು ಅವು ಮೂರೂ ಒಟ್ಟುಗೂಡುತ್ತವೆ ಹಾಗೂ ಅಂಥ ಸಮ್ಮಿಲನದಿಂದ ಪ್ರತಿವಸ್ತುಜನಕ ನಾಶವಾಗದೇ ಹೋಗಬಹುದು. ಆದರೆ ಇದು ಸಂಯೋಗವಾಗಿಬಿಟ್ಟಿರುವುದರಿಂದ ಹಾನಿಕಾರಕವಾಗಿರುವ ಸ್ವಭಾವವನ್ನು ಕಳೆದುಕೊಂಡಿರುತ್ತದೆ. ಇಂಥ ಸಂಯೋಗದಿಂದ ಪ್ರತಿವಸ್ತು ಮತ್ತು ಕಾಂಪ್ಲಿಮೆಂಟ್ ಎರಡೂ ಕಾರ್ಯಕ್ಷೇತ್ರದಲ್ಲಿ ಇಲ್ಲವಾಗಿ ಹೋಗುತ್ತವೆ ಎಂದೂ ಮನಗಾಣಬೇಕು.
ಪದೇ ಪದೇ ವಿವಿಧ ಬಗೆಯ ಪ್ರತಿವಸ್ತುಜನಕಗಳು ಮತ್ತು ಅವಕ್ಕೆ ವಿಶಿಷ್ಟವಾದ ಪ್ರತಿವಸ್ತುಗಳನ್ನು ಜಂಟಿಹಾಕುತ್ತ ದೇಹದಲ್ಲಿ ಕಾಂಪ್ಲಿಮೆಂಟಿನ ಮಟ್ಟ ಇಳಿದುಹೋಗುವ ಸಂಭವವಿದೆ. ಆರೋಗ್ಯಸ್ಥಿತಿಯಲ್ಲಿ ಅದು ಸತತವಾಗಿ ಉತ್ಪಾದಿತವಾಗುತ್ತದೆ. ಆದರೆ ರೋಗಕಾಲದಲ್ಲಿ ಉತ್ಪಾದನೆಗಿಂತ ವ್ಯಯ ಹೆಚ್ಚಾಗಿದ್ದು ಕಾಂಪ್ಲಿಮೆಂಟಿನ ಕೊರತೆ ಕಂಡುಬರುತ್ತದೆ. ಹೀಗಾದಾಗ ಪ್ರತಿ ವಸ್ತು ಯಥೇಚ್ಛವಾಗಿ ಹಾಜರಿದ್ದರೂ ಅದು ಪ್ರತಿಜನಕವನ್ನು ಏನೂ ಮಾಡಲಾರದು. ಏಕಾಣು ಸೋಂಕು ಉಂಟಾದಾಗ ರಕ್ಷಣೆಗಾಗಿ ಪ್ರತಿವಸ್ತು ಇರುವ ಲಸಿಕೆ ಕೊಡುವುದು ಇದೆಯಷ್ಟೆ. ರೋಗಿಯ ದೇಹದಲ್ಲಿ ತಕ್ಕಷ್ಟು ಕಾಂಪ್ಲಿಮೆಂಟ್ ಇಲ್ಲದಿದ್ದರೆ ಎಷ್ಟೇ ಪ್ರಮಾಣದಲ್ಲಿ ಪ್ರತಿವಸ್ತುಯುಕ್ತ ಲಸಿಕೆ ಕೊಟ್ಟರೂ ಏನೂ ರಕ್ಷಣೆ ಸಿಕ್ಕುವುದಿಲ್ಲ ಎಂಬುದನ್ನು ಗ್ರಹಿಸಬೇಕು. ಪ್ರತಿವಸ್ತುಯುಕ್ತ ಲಸಿಕೆಗಳನ್ನು ಪ್ರಯೋಗ ಪ್ರಾಣಿಗಳ ರಕ್ತದಿಂದ ಅನೇಕವೇಳೆ ಪಡೆದಿರುವುದರಿಂದ ಅದರಲ್ಲಿ ಕಾಂಪ್ಲಿಮೆಂಟೂ ಇದೆ ಎಂದೆನ್ನಿಸಬಹುದು. ಆದರೆ ಕಾಂಪ್ಲಿಮೆಂಟ್ ಅಸ್ಥಿರ. ಲಸಿಕೆಯನ್ನು ಸಂಗ್ರಹಿಸಿ ಇಟ್ಟಿರುವಾಗಲೆ ಅದು ಶೀಘ್ರವಾಗಿ ನಾಶವಾಗಿ ಹೋಗಿರುತ್ತದೆ. ಆದ್ದರಿಂದ ಪ್ರತಿವಸ್ತುಯುಕ್ತ ಲಸಿಕೆ ಕೊಡುವಾಗ ಕಾಂಪ್ಲಿಮೆಂಟನ್ನೂ ಕೊಡಬೇಕಾದೀತು ಎನ್ನುವುದು ಮುಖ್ಯ ಗಣನೆ.

ಈ ರೀತಿ ಕಾಂಪ್ಲಿಮೆಂಟಿನ ಮಟ್ಟ ಇಳಿದಿರುವಾಗ ಪ್ರತಿವಸ್ತು ಜನಕದೊಡನೆ ಪ್ರತಿವಸ್ತು ಇದ್ದರೂ ಏನೂ ಆಗದಿರುವುದನ್ನು ಪ್ರಯೋಗಾಲಯದಲ್ಲಿ ತೋರಿಸಬಹುದು. ಯಾವುದೋ ನಿರ್ದಿಷ್ಟ ಏಕಾಣುವಿನ ಸೋಂಕಿನಿಂದ ನರಳುತ್ತಿರುವ ವ್ಯಕ್ತಿಯ ರಕ್ತದಲ್ಲಿ ವಿಶಿಷ್ಟ ಪ್ರತಿವಸ್ತು ಉತ್ಪತ್ತಿ ಆಗಿರುವುದಷ್ಟೆ. ಅದು ಇನ್ನೂ ತಕ್ಕಷ್ಟು ಪ್ರಮಾಣದಲ್ಲಿ ಇಲ್ಲದಿರುವುದರಿಂದಲೋ ಮೇಲೆ ಹೇಳಿರುವುದರಿಂದಲೋ ಈ ಸಮಯದಲ್ಲಿ ಏಕಾಣುವಿನದೇ ಕೈಮೇಲಾಗಿದ್ದು ರೋಗ ಮುಂದುವರಿದಿರುತ್ತದೆ. ಅಂದರೆ ಈ ವ್ಯಕ್ತಿಯ ರಕ್ತ ಲಸಿಕೆಯಲ್ಲಿ ವಿಶಿಷ್ಟ ಪ್ರತಿವಸ್ತು ಮತ್ತು ಎಲ್ಲೊ ಸ್ವಲ್ಪ ಕಾಂಪ್ಲಿಮೆಂಟ್ ಇರುತ್ತವೆ ಎಂದಾಯಿತು. ಈ ಲಸಿಕೆಯನ್ನು ಪ್ರನಾಳದಲ್ಲಿ ತೆಗೆದುಕೊಂಡು ಅದಕ್ಕೆ ಕೃಷಿಯಿಂದ ಪಡೆದ ಅದೇ ಏಕಾಣುವಿನ ಕದಡನ್ನು (ಸಸ್ಪೆನ್‍ಷನ್) ಸೇರಿಸಿದರೆ ಏಕಾಣುನಾಶ ಉಂಟಾಗಿ ಪ್ರನಾಳದಲ್ಲಿರುವ ಕಾಂಪ್ಲಿಮೆಂಟ್ ಪೂರ್ತಿಯಾಗಿ ಕಣ್ಮರೆ ಆಗುತ್ತದೆ. ಇದನ್ನು ಬಾರ್ಡೆ ಕಾಂಪ್ಲಿಮೆಂಟ್ ಫಿಕ್ಸೇಷನ್ (ಕಾಂಪ್ಲಿಮೆಂಟಿನ ಸ್ಥಿರೀಕರಣ) ಎಂದು ಹೆಸರಿಸಿದ. ಕಾರ್ಯಕ್ಷೇತ್ರದ ವಸ್ತುಗಳು ವರ್ಣರಹಿತವಾಗಿರುವುದರಿಂದ ಪ್ರನಾಳದಲ್ಲಿ ಜರಗಿದ ಕಾರ್ಯದೃಗ್ಗೋಚರವಾಗುವುದಿಲ್ಲ. ಕಾಂಪ್ಲಿಮೆಂಟನ್ನು ಸ್ಥಿರೀಕರಿಸುವ ಇಂಥ ಸಂದರ್ಭದಲ್ಲಿ ಯಾವುದೋ ರಕ್ತಕಣ ಮತ್ತು ಅದರ ವಿಶಿಷ್ಟ ಹೀಮೊಲೈಸಿನ್ನನ್ನು ಪ್ರನಾಳಕ್ಕೆ ಸೇರಿಸಿದರೆ ಕಾಂಪ್ಲಿಮೆಂಟಿನ ಅಭಾವದಿಂದಾಗಿ ಆ ರಕ್ತಕಣದ ಛಿದ್ರತೆ ಉಂಟಾಗುವುದಿಲ್ಲ. ಕಣದಲ್ಲಿಯ ಹೀಮೋಗ್ಲೋಬಿನ್ ಹೊರಬರದೆ ಇರುವುದರಿಂದ ಒಟ್ಟು ದ್ರವ ಕೆಂಪಾಗುವುದೂ ಇಲ್ಲ. ಛಿದ್ರಗೊಳ್ಳದ ರಕ್ತಕಣ ತಳಸೇರುವುದರಿಂದ ಮೇಲಿನ ದ್ರವ ಸ್ವಚ್ಛಂದವಾಗಿ ವರ್ಣರಹಿತವಾಗಿಯೇ ಇರುತ್ತದೆ. ಅಂದರೆ ಕಾಂಪ್ಲಿಮೆಂಟಿನ ಸ್ಥಿರೀಕರಣ ಗೋಚರವಾಗುವಂತಾಗುತ್ತದೆ. ಈ ವಿಧಾನಕ್ಕೆ ಕಾಂಪ್ಲಿಮೆಂಟಿನ ಸ್ಥಿರೀಕರಣ ಪರೀಕ್ಷೆ ಎಂದು ಹೆಸರು. ಇಲ್ಲಿಯ ಪ್ರನಾಳ ಪ್ರಯೋಗದಲ್ಲಿ ರಕ್ತಕಣದ ಛಿದ್ರತೆ ಉಂಟಾಗಿ ದ್ರವ ಕೆಂಪುಬಣ್ಣಕ್ಕೆ ತಿರುಗಿದರೆ ಕಾರ್ಯಕ್ಷೇತ್ರದಲ್ಲಿ ಇನ್ನೂ ತಕ್ಕಷ್ಟು ಕಾಂಪ್ಲಿಮೆಂಟ್ ಇದೆ ಎಂದಾಯಿತು. ಅರ್ಥಾತ್ ಪ್ರನಾಳಕ್ಕೆ ಸೇರಿಸಿದ ಏಕಾಣುಕದಡು ರೋಗಿಯ ದೇಹದಲ್ಲಿರುವ ಪ್ರತಿವಸ್ತುವಿಗೆ ಅನುಗುಣವಾಗಿಲ್ಲ; ಅಂದರೆ ರೋಗಕ್ಕೆ ಕಾರಣ ಆ ಏಕಾಣು ಅಲ್ಲ ಎಂಬುದಕ್ಕೆ ರುಜುವಾತು ಸಿಕ್ಕುತ್ತದೆ. ಒಟ್ಟಿನಲ್ಲಿ ಈ ವಿಧಾನದಿಂದ ರೋಗಕಾರಕ ಏಕಾಣು ನಿರೀಕ್ಷಿಸಿದ ರೋಗಕಾರಕ ಹೌದೇ ಅಲ್ಲವೇ ಎಂಬ ಸ್ಪಷ್ಟನೆ ದೊರೆಯುತ್ತದೆ.

1901ರಲ್ಲಿ ಬಾರ್ಡೆಯೂ ಅವನ ಭಾವ ಗೆಂಗೌ ಎಂಬ ಇನ್ನೊಬ್ಬ ವಿಜ್ಞಾನಿಯೂ ಈ ವಿಧಾನ ಬಳಸಿ ಬೆನ್ನುಫಣಿ ರೋಗಿಯೊಬ್ಬನಲ್ಲಿ ರೋಗಕಾರಕ ಟೈಫಾಯಿಡ್ ವಿಷಾಣುವಾಗಿತ್ತೆಂದೂ ಹಂದಿಗಳಲ್ಲಿ ಕಾಲರ ಉಂಟುಮಾಡುವ ವಿಷಾಣು ವಿಶಿಷ್ಟವಾದುದೆಂದೂ ಮುಂತಾಗಿ ತೋರಿಸಿದ. ವಾಸರ್ಮನ್ ಎಂಬ ವೈದ್ಯವಿಜ್ಞಾನಿ ಈ ವಿಧಾನ ಬಳಸಿಕೊಂಡು ಪರಂಗಿ ರೋಗದಿಂದ ಒಬ್ಬ ವ್ಯಕ್ತಿ ನರಳುತ್ತಿರುವನೇ ಎಂದು ಪತ್ತೆ ಮಾಡುವ ಬಗ್ಗೆ ವಿವರಿಸಿದ. ಇದಕ್ಕೆ ವಾಸರ್ಮನ್ ಪರೀಕ್ಷೆ ಎಂದೇ ಹೆಸರು. ಇದು ಸುಮಾರು 1950ರ ತನಕ ಪರಂಗಿ ರೋಗದ ಮುಖ್ಯ ಪರೀಕ್ಷಾ ವಿಧಾನವಾಗಿತ್ತು. ಈಚೆಗೆ ಈ ವಿಧಾನವನ್ನು ಸ್ವಲ್ಪ ಬದಲಿಸಿ ಸೂಕ್ಷ್ಮತೆ ಹೆಚ್ಚಿಸಿದ್ದಾಗಿದೆ. ಅಲ್ಲದೆ ಅನೇಕ ಬಗೆಯ ವೈರಸ್‍ಕೃತ ರೋಗಗಳನ್ನೂ ನಿಖರವಾಗಿ ಪತ್ತೆಮಾಡಲು ಬಳಸುವುದಾಗಿದೆ.

ಬಾರ್ಡೆ ಮತ್ತು ಗೆಂಗೌ ನಾಯಿಕೆಮ್ಮಿನ ವಿಷಾಣುಗಳನ್ನು ಪ್ರತ್ಯೇಕಿಸಿ (1906) ಯುಕ್ತ ಪ್ರತಿರೋಧಕ ಲಸಿಕೆ ತಯಾರಿಸಿದರು. 1909ರಲ್ಲಿ ಬಾರ್ಡೆ ದನಗಳ ನ್ಯುಮೋನಿಯ ರೋಗಾಣುಗಳನ್ನೂ ಪಕ್ಷಿಗಳ ಡಿಫ್ತೀರಿಯ ರೋಗಾಣುಗಳನ್ನೂ ಪ್ರತ್ಯೇಕಿಸಿದ. ರಕ್ತಗರಣೆ ಕಟ್ಟುವ ವಿಧಾನ ಮತ್ತು ಅದರಲ್ಲಿ ಪಾತ್ರವಹಿಸುವ ಘಟಕಗಳ ಬಗ್ಗೆ ಬಾರ್ಡೆ ಅನೇಕ ಆವಿಷ್ಕಾರಗಳನ್ನು ಮಾಡಿದೆ. (1907-20). ಏಕಾಣುನಾಶಕಗಳಾದ ಬ್ಯಾಕ್ಟೀರಿಯೊಫೇಜುಗಳೆಂಬ ವೈರಸ್ಸುಗಳ ವ್ಯಾಸಂಗಗಳ ಜೊತೆಗೆ ಬ್ರಬಾಮಟಿನ ಪಾಶ್ತರ್ ಸಂಸ್ಥೆಯ ಏಳ್ಗೆಗೂ ಬಹುವಾಗಿ ಶ್ರಮಿಸಿದ. ಇವನ ಏಕಮಾತ್ರ ಪುತ್ರ ಪ್ರಾಯೋಗಿಕ ವೈದ್ಯನಾಗಿ ತರಬೇತುಪಡೆದು ಆ ಸಂಸ್ಥೆಯ ಮೇಲ್ವಿಚಾರಣೆ ವಹಿಸಿಕೊಂಡು ಬಳಿಕ (1940) ಬಾರ್ಡೆ ಬ್ರಸ್ಸೆಲ್ಸಿನ ಮುಕ್ತ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ಪೂರ್ಣಕಾಲ ನಿರತನಾದ. ಅಲ್ಲಿ ಪ್ರತಿರೋಧ ವಿಜ್ಞಾನದ ವಿಷಯವಾಗಿ ಬಲಿಷ್ಠ ತಳಹದಿ ಹಾಕಿದ್ದಕ್ಕಾಗಿ ಬಾರ್ಡೆಗೆ 1919ರ ನೊಬೆಲ್ ಪಾರಿತೋಷಿಕ ನೀಡಲ್ಪಟ್ಟಿತು. ಮರಣ 6-4-1961 ಬ್ರಸ್ಸೆಲ್ಸ್‍ನಲ್ಲಿ 					(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ